ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೮೩

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಈ ನಾಡು

ಉತ್ತರದಲ್ಲಿ ಸೀತಾನದಿ ಗಡಿಯು,
ದಕ್ಷಿಣದಲ್ಲಿ ಪಯಸ್ವಿನಿಯು,
ಪೂರ್ವದ ಪಶ್ಚಿಮಗಟ್ಟವೆ ಮೇರೆ,
ಪಡುವಲು ಸುತ್ತಿದೆ ಕಡಲತೆರೆ.

ಈ ನಾಡನು-ತುಳುನಾಡನು, ಹಿಂದಕೆ
ಆಳಿದರರಸರು ದೊರೆತನದಿ;
ಅಜಿಲರು, ಚೌಟರು, ಬಂಗರು, ಬಲ್ಲಾ-
ಳರು, ಸಾಮಂತರು ಮನೆತನದಿ.

ವಿಟ್ಟಲ, ಕುಂಬಳೆ, ಬಾರ್ಕೂರೆನ್ನುತ
ಸೀಮೆಗಳಿದ್ದುವು ಹಲವಿಲ್ಲಿ;
ಸೀಮೆಗಳಾಳಿದ ರಾಜರ ಸಂತತಿ
ಇಂದಿಗು ಕೆಲವಿದೆ ಹೆಸರಲಿ!

ಎಲ್ಲಾ ಸೀಮೆಯನೆಲ್ಲಾ ದೊರೆಗಳು
ಚಂದದೊಳಾಳಿದರೆಂದಲ್ಲ;
ಆದರು, ರಾಜ್ಯದಿ ದಾನಧರ್ಮಗಳು
ನೇಮನಡಾವಳಿ ಕುಂದಿಲ್ಲ;

ಕಲ್ಲನು ಕೆತ್ತುತ ಜೀವವ ತುಂಬಿ
ತೋರಿದರೈ ತುಳು ಶಿಲ್ಪಿಗಳು!
ಸಲ್ಲಲಿತದ ಸವಿ ಪಾಡ್ದನ ಹಾಡಿ
ಉಬ್ಬಿದರೈ ತುಳುಕಬ್ಬಿಗರು.

ಹಾ! ಕಾಲನ ಬೇತಾಲನ ಕುಣಿತಕೆ
ಅಂದಿನರಮನೆಗಳುರುಳಿದುವು;
ಕಲಸಕನ್ನಡಿಯು, ಕೋಟೆಕೊತ್ತಳವು,
ಮಂದಿಮಾರ್ಬಲವು ಹೊರಳಿದವು!

ಕಯ್ಯಾರೆರ್ನ ಕಬಿತೆಲು / 70