ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೮೦

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ವೇದ ಬೈಬಲ್ ಧಮ್ಮಪದ
ಜೈನಾಗಮವನೀ ಜೀರ್ಣಿಸಿ;
ಎತ್ತಿತೋರಿದೆ ರತ್ನದಂತಹ
ಕಾವ್ಯಕಥೆಗಳ ಪೂರ್ಣಿಸಿ.

ಎದೆಯ ಸ್ನೇಹವನೆರೆದು ಉರಿಸಿದೆ
ಕಾವ್ಯನಂದಾದೀಪವ,
ಜೀವ ಕೃಷ್ಣಾರ್ಪಿತವೆಂಬೆನು
ಆ ಅಭಿನ್ನದ ಭಾವವ.

ಆತ್ಮನಲ್ಲಿ ಪರಮಾತ್ಮದರ್ಶನ
ಕಾಂಬ ಮಹಿಮಾದೃಷ್ಟಿಯು
ಅದೆ ನಿರಂತರ ನಿನ್ನ ಚಿಂತನ
ಅದಕೆ ಕಾವ್ಯದ ಸೃಷ್ಟಿಯು

ಸತ್ಯದನ್ವೇಷಣೆಗೆ ತೊಡಗಿ
ಚರಿತೆ ಶೋಧನೆ ಮಾಡಿದೆ.
ಕವಿಯ ಕಾಲದ ಕಾವ್ಯದಾಳವ
ಮಥಿಸಿ ಬೋಧನೆ ನೀಡಿದೆ.

ನೀನು ಪಾಂಡಿತ್ಯದ ಹಿಮಾಚಲ
ಶಿಖರ - ಗೌರೀಶಂಕರ;
ನಿನ್ನ ಬಣ್ಣಿಸಲೆನ್ನಳವೆ? ನಾ
ಕಿರಿಯವನು ಕವಿಕಿಂಕರ.

ಕವಿತೆ ಸಂಶೋಧನೆಗಳುಭಯವು
ಸವ್ಯಸಾಚಿಸಿ ಸಾಗಿತು,
ಆಂಗ್ಲ ಕೊಂಕಣಿ ಕನ್ನಡಗಳ
ತ್ರಿವೇಣಿಸಂಗಮವಾಯಿತು.

ಪದ್ಯದಲ್ಲಿಯು ಗದ್ಯದಲ್ಲಿಯು
ನಿನ್ನ ಶೈಲಿಯು ನಿನ್ನದೆ;
ಒಬ್ಬ ಪೈ ಮತ್ತೊಬ್ಬರಿಲ್ಲವು
ಎಂಬ ಹೆಮ್ಮೆಯು ನಮ್ಮದೆ.

ಕಯ್ಯಾರೆರ್ನ ಕಬಿತೆಲು / 67