ಈ ಪುಟೊನು ಪ್ರಕಟಿಸದ್ ಆಂಡ್
ನೇತ್ರಾವತಿ
ಪಡುವಣ ಬುಡದಲಿ ಹುಟ್ಟಿ,
ಕುದುರೆಮುಖದ ಬಂಡೆ ತಲೆ ಮೆಟ್ಟಿ.
ಹಾರುತ, ಬೀಳುತ, ಕುಣಿಯುತ, ಮಣಿಯುತ
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 1 ||
ಎಡ ಬಲ ದಂಡೆಯ ಕೊರೆಯುತ ತಾಗಿ,
ಕಲ್ಲನು ಮಣ್ಣನು ಕೊಚ್ಚುತ ಸಾಗಿ,
ಎಲ್ಲಿಯು ನಿಲ್ಲದೆ, ಯಾರನು ಕೇಳದೆ,
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 2 ||
ಹೊಂಬಣ್ಣದ ಹೊಸ ಕಿರಣವ ಬೀರಿ,
ಬಂದಿರೆ ರವಿ ಮೂಡಣ ಗಿರಿಯೇರಿ,
ಸೂರ್ಯನ ಮುಂಗಡೆ ಕನ್ನಡಿ ಹಿಡಿದು
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 3 ||
ಸುತ್ತಲು ತುಂಬಿದ ಹೊಲಗಳಿಗೆಲ್ಲ
ನೀರೆರೆಯುತ, ಫಲ ಬರಿಸುವಳಲ್ಲ.
ಬೆಳೆಗಳ ಬೆಳೆಸಿ, ತೋಟವನುಳಿಸಿ,
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 4 ||
ಜಳ್ಳವನಿಳಿಸುತ ಹಾಕಲು ಹುಟ್ಟು
ದೋಣಿಯ ದೂಡಿರೆ ಹಾಯಿಯ ಬಿಟ್ಟು
ಜನರನು ದಾಟಿಸಿ ದಡದಿಂ ದಡಕ್ಕೆ.
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು || 5 ||
ಕಯ್ಯಾರೆರ್ನ ಕಬಿತೆಲು / 48