ಕೊರಗ
ಸುಡುವ ಬಿಸಿಲಿನ ಬೇಗೆಯುರಿ ಬಡಿದು, ತೊಗಲೆಲ್ಲ
ಸುಟ್ಟು ಸೀಕರಿಹೋದರೂ ಬಣ್ಣಕೆಡದಂಥ
ಕರಿಮೆಯ್ಯ ಹಿರಿಜೀವ! ಭೋರೆಂಬ ಜಡಿಮಳೆಗೆ
ಅಡಿಯಿಂದ ಮುಡಿವರೆಗು ನೀರು ಧಾರಾಕಾರ
ಸುರಿಯುತ್ತಿದ್ದರು ಶೀತನಿರ್ಲಿಪ್ತ ಸಮಭಾವ!
ಮೈಮಾನ ಮುಚ್ಚಲಿಕೆ, ನಡನಡುಗಿಸುವ ಚಳಿಗೆ,
ಹರುಕುಚಿಂದಿಯ ಹೊದಿಕೆ
ಏನಿಲ್ಲವೀತನಿಗೆ !
ಪ್ರಕೃತಿಯ ಪ್ರಕೋಪಕ್ಕೆ ತಾಪಕ್ಕೆ ಶಾಪಕ್ಕೆ
ಎಲ್ಲದಕು ಮೂಕಬಲಿಯಾಗಿಯೇ ಬಾಳ್ದವನು!
ಕಾಟಿಕಾಡಾನೆಗಳ ತೊತ್ತಳದ ತುಳಿತಕ್ಕೆ
ಹಗಲಿರುಳು ತಲೆಯೊಡ್ಡಿ ಬೆಟ್ಟದಡಿಯಲ್ಲಿ ಚಾಚಿ
ಬಿದ್ದಿರುವ ಹೆಬ್ಬಂಡೆಯಂತಿಹನು! ಬುರುಡೆಗವಿ
ಒಳಮುದುಡಿ ಮಿದುಳೊ
ಮಹಾಮೌನಿ! ಇರಲೊಂದು
ಮನೆಯಿಲ್ಲ, ಮಠವಿಲ್ಲ, ಗುರಿ ತೋರ್ಪ ಗುರುವಿಲ್ಲ.
ಸುಖದುಃಖದರಿವಿಲ್ಲ, ನಲ್ಮೆಬಲ್ಮೆಗಳಿಲ್ಲ;
ಇಲ್ಲವೆಂಬುದೆ ಇವನ ಬದುಕು ಭಾಗ್ಯಗಳೆಲ್ಲ!
ಏನಾದರೂ ತನಗೆ, ನೋವಾದರೂ ತನುಗೆ
ಎಂತಾದರೂ ಮನಕೆ-
ಯಾವುದಕು ಇವ ಕೊರಗ!
ನಾಡನಾಳುವ ಮಂದಿ - ಉತ್ತಮೋತ್ತಮ ಜನರು
ವೇದಶುದ್ಧ ಸಮಾಜ, ಮುಖಕೆ ಉಗುಳುವ ತೆರದಿ
ಇವನ ಪೀಳಿಗೆಗೆಸೆದ ಹೆಸರು ಕಾಡಿನ ಕೊರಗ!
ಮಾನಪಮಾನವೋ ಲಾಭವೋ, ನಷ್ಟವೋ
ಸೋಲೋ ಗೆಲುವೋ
ಸುಖವೋ ದುಃಖವೋ ಬಂದಿರಲಿ,
ಮೇಣಾವುದೂ ಬರದಿರಲಿ, ಎಂತಾದರೂ ಕೊರಗ!
ಕಯ್ಯಾರೆರ್ನ ಕಬಿತೆಲು / 57